Chief Editor
Manohar. R (Manu)
Photo Journalist
chitrataramanu@gmail.com
+91 9845549026
`ವೇದ` ಮುನಿದ ನಾರಿಯ ಪ್ರತೀಕಾರದ ಕಥೆ.. 3.5/5 ****
Posted date: 25 Sun, Dec 2022 06:28:30 PM
ಹೆಣ್ಣನ್ನು ಪ್ರಕೃತಿ ಮಾತೆಗೆ ಹೋಲಿಸುತ್ತಾರೆ. ಆಕೆ ಭೂಮಿಯಷ್ಟೇ ಸಹನಾಮೂರ್ತಿ. ಅಂಥಾ ಮಹಿಳೆಯನ್ನು ಹೀನಾಯವಾಗಿ ನಡೆಸಿಕೊಂಡರೆ, ಆಕೆಯನ್ನು ಕೆಣಕಿದರೆ  ಅದರ ಪರಿಣಾಮ ಏನಾಗಬಹುದು ಎಂಬುದನ್ನು  ವೇದ ಚಿತ್ರದ ಮೂಲಕ ನಿರ್ದೇಶಕ ಹರ್ಷ ಹೇಳಿದ್ದಾರೆ.  ಸಮಾಜದಲ್ಲಿ ಹೆಣ್ಣಿನಮೇಲೆ ಹಿಂದಿನ ಕಾಲದಿಂದಲೂ ಶೋಷಣೆ, ದೌರ್ಜನ್ಯ ನಡೆಯುತ್ತಲೇ ಇದೆ, ಅಂಥಾ ಸಂದರ್ಭದಲ್ಲಿ ಆಕೆ ಹೇಗೆ ರಿವೆಂಜ್ ತೆಗೆದುಕೊಳ್ಳಬಹುದು ಎಂಬುದನ್ನು   ನಿರ್ದೇಶಕ ಹರ್ಷ ತೆರೆಮೇಲೆ ಹೇಳಿದ್ದಾರೆ. ಅಮಾಯಕ ಹೆಣ್ಣಿನ ಕ್ರೋಧದ ಕತೆಯಿದು.  ತನ್ನ ಮೇಲಾದ ಅನ್ಯಾಯಕ್ಕೆ ಕಾರಣರಾದ ದುರುಳರನ್ನು ಆಕೆ ಹೇಗೆ ನಿರ್ನಾಮ ಮಾಡುತ್ತಾಳೆ.
 
ಅತ್ಯಾಚಾರಿಗಳ ರುಂಡಗಳನ್ನು ಹೇಗೆ  ಚೆಂಡಾಡುತ್ತಾಳೆ ಎನ್ನುವುದೇ ಚಿತ್ರದ ಕಥೆ. ವೇದ ನಾಯಕಪ್ರಧಾನ ಚಿತ್ರವೇ ಆದರೂ ಇಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ವಿದೆ. ಅಪ್ರಾಪ್ತ ಬಾಲಕಿಯರ ಮೇಲೆ ನಡೆಯೋ ಅತ್ಯಾಚಾರಗಳನ್ನು ತಡೆಯಬೇಕೆಂದರೆ ಮೊದಲು ನಮ್ಮ ಮಹಿಳೆಯರು ಶಕ್ತಿವಂತರಾಗಬೇಕು. ಆಕೆ ಕೈಎತ್ತಿದರೆ ಯಾರೂ ಸಹ ತಡೆಯಲಾರರು ಎಂಬುದನ್ನು ವೇದ ಸಿನಿಮಾದ ಮೂಲಕ  ನಿರ್ದೇಶಕ ಹರ್ಷ ಹೇಳಿದ್ದಾರೆ.
 
ಚಿತ್ರದ ಕಥೆ ಆರಂಭವಾಗುವುದು ಈಗಿನ ಕಾಲದಲ್ಲಿ, ನಂತರ ಹಿಂದೆ, ಅದಕ್ಕೂ ಹಿಂದೆ ಹೋಗುತ್ತದೆ.  ಪಕ್ಕದ  ಹಳ್ಳಿಯ ಯುವತಿ ಪುಷ್ಪ(ಗಾನವಿ ಲಕ್ಷ್ಮಣ್)ಳನ್ನು ಒಂದು ಅನಿವಾರ್ಯ ಸಂದರ್ಭದಲ್ಲಿ ವೇದ(ಶಿವಣ್ಣ) ತಾಳಿ ಕಟ್ಟಿ ಮದುವೆಯಾಗುವುದರೊಂದಿಗೆ  ಆರಂಭವಾಗುವ ಕಥೆ ಮುಂದೆ ಹಲವಾರು ತಿರುವುಗಳನ್ನು ಪಡೆಯುತ್ತದೆ.  ನಾಯಕಿಯ ಸೋದರಮಾವನೇ ಚಿತ್ರದ ಖಳನಾಯಕ,  ಶಿವಣ್ಣ ಪ್ರತಿ ದೃಶ್ಯದಲ್ಲೂ ಅದ್ಭುತವಾದ ಅಭಿನಯ ನೀಡಿದ್ದಾರೆ. ಆಕ್ಷನ್ ದೃಶ್ಯಗಳನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ಜೊತೆಗೆ ಅವರ ಫ್ಲಾಶ್‌ಬ್ಯಾಕ್ ದೃಶ್ಯಗಳಲ್ಲಿ ಕಾಣುವ ತುಂಟತನ, ಉತ್ಸಾಹ, ಹಾಡು, ನೃತ್ಯ ಎಲ್ಲದರಲ್ಲೂ ಶಿವಣ್ಣ ಸೈಎನಿಸಿಕೊಂಡಿದ್ದಾರೆ. ಅದರಲ್ಲೂ ಜುಂಜಪ್ಪನ ಹಾಡಲ್ಲಿ ಶಿವಣ್ಣ ಅವರ ಎನರ್ಜಿಟಿಕ್ ಅಭಿನಯ ನೋಡುವವರನ್ನು ಮೂಕವಿಸ್ಮಿತರಾಗಿಸುತ್ತದೆ.  
 
ಚಿತ್ರದಲ್ಲಿ ಬರುವ ಎಲ್ಲಾ ಮಹಿಳಾ ಪಾತ್ರಗಳು ತುಂಬಾ ಶಕ್ತಿಶಾಲಿಯಾಗಿವೆ. ನಾಯಕಿ ಗಾನವಿ, ಶಿವಣ್ಣನ ಮಗಳ ಪಾತ್ರ ಮಾಡಿರುವ ಅದಿತಿ ಸಾಗರ್, ವೇಶ್ಯೆಯ ಪಾತ್ರಧಾರಿ ಶ್ವೇತಾ ಚಂಗಪ್ಪ, ನಾಯಕ ವೇದನ ಸಾಕುತಾಯಿ ಉಮಾಶ್ರೀ ಇವರೆಲ್ಲರ ಪಾತ್ರಗಳೂ  ಪವರ್‌ಫುಲ್ ಆಗಿವೆ. ಶಿವಣ್ಣನ ಚಾರ್ಮ್ ನಡುವೆಯೂ ಅದಿತಿ ಸಾಗರ್ ಹಾಗೂ ಗಾನವಿ ಲಕ್ಷ್ಮಣ್ ಇಬ್ಬರೂ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ಅದಿತಿ ಸಾಗರ್ ತೆರೆಯಮೇಲೆ ಕಂಡಷ್ಟೂ ಭಾಗ  ಆಕೆಯ ಮುಖದಲ್ಲಿ ಸಿಟ್ಟು, ರೋಷ ಎದ್ದು ಕಾಣುತ್ತದೆ.
 
ಕಥೆಯಲ್ಲಿರುವ ಎಲ್ಲಾ ಮಹಿಳಾ ಪಾತ್ರಗಳಲ್ಲಿ ಒಂದೊಂದು ವಿಶೇಷತೆಯಿದೆ. ಇನ್ನು ಚಿತ್ರಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತವೂ ದೃಶ್ಯಗಳಿಗೆ ಪೂರಕವಾಗಿದೆ. ಸಿನಿಮಾದ ಕ್ಯಾಮೆರಾವರ್ಕ್ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಸಾಕಷ್ಟು ಶ್ರಮವಹಿಸಿರುವುದು ಎದ್ದು ಕಾಣುತ್ತದೆ. ಇಡೀ ಸಿನಿಮಾ ಡಾರ್ಕ್ ಶೇಡ್ ನಲ್ಲಿದ್ದು, ಬೆಳಕಿಗಿಂತ ಕತ್ತಲೆಯೇ ಹೆಚ್ಚು ಆವರಿಸಿದೆ. ನಿರ್ದೇಶಕರ ಆಶಯಕ್ಕೆ ತಕ್ಕಂತೆ ಛಾಯಾಗ್ರಾಹಕ ಸ್ವಾಮಿ ಜೆ. ಗೌಡ ಕೆಲಸವೂ ಮೂಡಿಬಂದಿದೆ. ಚಿತ್ರದ ಸಂಭಾಷಣೆಗಳು ಸಹ ಅಷ್ಟೇ ಚುರುಕಾಗಿವೆ. ಕೊನೆಯಲ್ಲಿ ಶಿವಣ್ಣ ಹೇಳುವ ಮಾತಂತೂ ನೋಡುಗರನ್ನು ತಟ್ಟುತ್ತದೆ. ನಿರ್ದೇಶಕ ಹರ್ಷ ಭಜರಂಗಿ ಸೀರೀಸ್‌ನ ಚಿತ್ರಗಳನ್ನೇ ಮಾಡಹೊರಟಂತಿದೆ. ಒಟ್ಟಾರೆ ಲಾಜಿಕ್ ಬಿಟ್ಟು ಮನರಂಜನೆಯ ದೃಷ್ಟಿಯಿಂದ ನೋಡುವುದಾದರೆ ವೇದ ಉತ್ತಮ ಕಲಾಕೃತಿ. 
 
ಶಿವಣ್ಣನ ಪಾತ್ರಕ್ಕಿಂತಲೂ ಮಹಿಳಾ ಪಾತ್ರಗಳೇ ಒಮ್ಮೊಮ್ಮೆ ಹೆಚ್ಚು ಅಬ್ಬರಿಸುತ್ತವೆ.  ನಿರೂಪಣೆಯಲ್ಲಿ ಹೊಸ ಶೈಲಿಯನ್ನು ಹರ್ಷ ಅನುಸರಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ವೇದ` ಮುನಿದ ನಾರಿಯ ಪ್ರತೀಕಾರದ ಕಥೆ.. 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.